ನ್ಯೂಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್
	ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂ ಯಾರ್ಕ್ ನಗರದಿಂದ ಪ್ರಕಟವಾಗುತ್ತಿದ್ದ ದಿನಪತ್ರಿಕೆ. ನ್ಯೂಯಾರ್ಕ್ ಟ್ರಿಬ್ಯೂನ್ ಪತ್ರಿಕೆಯಲ್ಲಿ ವರದಿಗಾರನಾಗಿದ್ದ ಆಗ್ಡನ್ ಮಿಲ್ಸ್ ರೀಡ್ (1882-1947) 1913ರಲ್ಲಿ ಆ ಪತ್ರಿಕೆಯ ಸಂಪಾದಕತ್ವವನ್ನು ತನ್ನ ತಂದೆಯಿಂದ ವಹಿಸಿಕೊಂಡು, 1924ರಲ್ಲಿ ನ್ಯೂಯಾರ್ಕ್ ಹೆರಾಲ್ಡ್ ಪತ್ರಿಕೆಯನ್ನು ಕೊಂಡು ಎರಡನ್ನೂ ವಿಲೀನಗೊಳಿಸಿದ. ಆ ಪತ್ರಿಕೆಯೇ ನ್ರ್ಯಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್. ತನ್ನ ಜೀವನದ ಕೊನೆಯವರೆಗೂ ರೀಡ್ಸ್ ಇದರ ಸಂಪಾದಕನಾಗಿದ್ದ. ಹೆರಾಲ್ಡ್ ಟ್ರಿಬ್ಯೂನ್‍ಗಳು ಪರಸ್ಪರ ವಿಲೀನಗೊಳ್ಳುವ ಮುನ್ನ ಸಣ್ಣ ಪತ್ರಿಕೆಗಳಾಗಿದ್ದರೂ ಪ್ರತ್ಯೇಕವಾಗಿ ಸ್ವತಃ ಇತಿಹಾಸ ಸೃಷ್ಟಿಸಿದ ಪತ್ರಿಕೆಗಳು.

	ಅಮೆರಿಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ 1830-1860ರ ಅವಧಿಯನ್ನು ಪೆನಿಪತ್ರಿಕೆಗಳ ಯುಗ ಎಂದು ಕರೆಯಲಾಗಿದೆ. 1833ರಲ್ಲಿ ಪ್ರಕಟವಾಗತೊಡಗಿದ ನ್ಯೂ ಯಾರ್ಕ್ ಸನ್ ಪತ್ರಿಕೆಯಿಂದ ಇಂಥ ಪತ್ರಿಕೆಗಳ ಪರಂಪರೆ ಆರಂಭವಾಯಿತು. ಸನ್ ಆರಂಭವಾದ ಐದೇ ವರ್ಷಗಳಲ್ಲಿ ಸುಮಾರು 34 ದಿನ ಪತ್ರಿಕೆಗಳು ಅದೇ ಮಾದರಿಯಲ್ಲಿ ಮೊದಲಾದುವು. ಅವು ಬೇಗ ನಿಂತುಹೋದುವು. ನ್ಯೂಯಾರ್ಕ್ ಹೆರಾಲ್ಡ್ ಮತ್ತು ನ್ಯೂಯಾರ್ಕ್ ಟ್ರಿಬ್ಯೂನ್‍ಗಳು ಮಾತ್ರ ಗಟ್ಟಿಯಾಗಿ ಉಳಿದುಕೊಂಡುವು. ಆರು ಸೆಂಟ್ ಬೆಲೆಯ ಪತ್ರಿಕೆಗಳು ಚಾಲ್ತಿಯಲ್ಲಿದ್ದಾಗ ಒಂದೇ ಸೆಂಟ್ ಬೆಲೆಯ ಈ ಪತ್ರಿಕೆಗಳು ಬಹಳ ಜನಪ್ರಿಯವಾದುವು. ಅಗ್ಗವೆಂಬ ದೃಷ್ಟಿಯಿಂದ ಮಾತ್ರವೇ ಅಲ್ಲ, ಪತ್ರಿಕಾ ಪ್ರಪಂಚದ ಪ್ರಪ್ರಥಮ ಪ್ರಯೋಗಗಳನ್ನು ದಿಟ್ಟವಾಗಿ ನಡೆಸಿದ್ದರಿಂದಲೂ ಇವು ವಿಭಿನ್ನವಾಗಿ ಉಳಿದುವು. ಈಗ ಕ್ಲೀಷೆಯಾಗಿರುವ ಬಿಸಿ ಬಿಸಿ ಸುದ್ದಿ ಎಂಬುದನ್ನು ಈ ಪತ್ರಿಕೆಗಳೇ ಪ್ರವರ್ತಿಸಿದ್ದು.

	1835ರ ಮೇ 6 ರಂದು ಜೇಮ್ಸ್ ಗಾರ್ಡನ್ ಬೆನೆಟ್ (1795-1872) ಆರಂಭಿಸಿದ ಹೆರಾಲ್ಡ್ ಪತ್ರಿಕೆಯ ಪ್ರಸಾರ ಆರೇ ವಾರಗಳಲ್ಲಿ ಏಳು ಸಾವಿರಕ್ಕೆ ಏರಿತ್ತು. ಮನುಷ್ಯನ ಎಲ್ಲ ಚಟುವಟಿಕೆಗಳೂ ವಿಸ್ತರಿಸಿಕೊಳ್ಳುವ ಕಾರ್ಯವ್ಯಾಪ್ತಿ ಆ ಪತ್ರಿಕೆಗೆ ಇದ್ದುದೇ ಇದಕ್ಕೆ ಕಾರಣ. ಆ ಪುಟ್ಟ ಪತ್ರಿಕೆಯಲ್ಲಿ ನಾಟಕ, ಸಂಗೀತ, ಸಂಘ ಸಂಸ್ಥೆಗಳು, ಕ್ರೀಡೆ, ನ್ಯಾಯಾಲಯ ಪ್ರಕರಣ, ವಿದೇಶ ಸುದ್ದಿ ಎಲ್ಲವೂ ಬರುತ್ತಿದ್ದುವು. ಸುದ್ದಿ ಬರವಣಿಗೆ ಕೂಡ ರಂಜನೀಯವಾಗಿತ್ತು. ಓದಲು ತವಕಪಡುವಂಥ, ಓದುವಾಗ ಉದ್ರೇಕಕಾರಿಯಾಗುವಂಥ ಬರಹ ಇರುತ್ತಿತ್ತು. ಸುದ್ದಿ ಕೂಡ ಅಂದಂದಿಗೆ ತಾಜಾ ಆಗಿರುತ್ತಿತ್ತು. ವಾಷಿಂಗ್ಟನ್ನಿನಲ್ಲಿ ಹಾಗೂ ಯೂರೋಪಿನ ಕೆಲವು ಕಡೆ ಕೇಂದ್ರಗಳನ್ನು ತೆರೆದಿದ್ದ ಈ ಪತ್ರಿಕೆ 1845ರಲ್ಲಿ ಮೆಕ್ಸಿಕನ್ ಯುದ್ಧದ ಸುದ್ದಿಯನ್ನು ಅಮೆರಿಕದ ಅಂಚೆ ಇಲಾಖೆ ಸುದ್ದಿ ಪತ್ರವನ್ನು ತಲುಪಿಸುವ ಮುನ್ನವೇ ಪ್ರಕಟಿಸುತ್ತಿತ್ತು.

	ಆದರೆ ಸಂಪಾದಕ ಬೆನೆಟ್‍ನ ಸಾರ್ವಜನಿಕ ನಡವಳಿಕೆ ಅತಿರೇಕದ್ದಾಗಿತ್ತು. ತನ್ನ ಪತ್ರಿಕೆಯಲ್ಲಿ ಎದುರಾಳಿಗಳನ್ನು ವೈಯಕ್ತಿಕವಾಗಿ ಟೀಕಿಸುವುದು, ನಿಂದಿಸುವುದು ಈತನ ಧಾಟಿಯಾಗಿತ್ತು. (ಎದುರಾಳಿ ಪತ್ರಿಕೆಯ ಸಂಪಾದಕನೊಬ್ಬ ಕುಂಟನಾಗಿರುವುದಕ್ಕೆ ದೈವದ ಶಾಪ ಅವನ ಮೇಲಿರುವುದೇ ಕಾರಣವೆಂದು ಆತ ಒಮ್ಮೆ ಬರೆದಿದ್ದ). ಕೊನೆಗೆ ನ್ಯೂ ಯಾರ್ಕಿನ ಜನ ತುಂಬ ರೋಸಿಹೋದರು. ಬೆನೆಟ್‍ನ ಹಾಗೂ ಅವನ ಹೆರಾಲ್ಡ್ ನ ವಿರುದ್ಧ ಜನರ ಹಾಗೂ ಪತ್ರಿಕೆಗಳ ನೈತಿಕಯುದ್ಧ ನಡೆಯಿತು.

	ಈ ಬಿಸಿಯಲ್ಲಿ ನ್ಯೂ ಯಾರ್ಕ್ ಟ್ರಿಬ್ಯೂನ್ ಮೇಲಕ್ಕೆ ಬಂದಿತು. 1841ರ ಏಪ್ರಿಲ್ 10ರಂದು ಹೊರೇಸ್ ಗ್ರೀಲಿ (1811-1872) ಟ್ರಿಬ್ಯೂನನ್ನು ಸ್ಥಾಪಿಸಿದ್ದ. ವೈಯಕ್ತಿಕ ಬರಹಗಳು ಇದರಲ್ಲೂ ಇದ್ದುವಾದರೂ ಸಾಮರಸ್ಯಕ್ಕೆ, ನಾವೀನ್ಯಕ್ಕೆ ಭಂಗ ತರದೆ ಉನ್ನತ ಬೌದ್ಧಿಕ ಮಟ್ಟವನ್ನು ಗ್ರೀಲಿ ಕಾಪಾಡಿಕೊಂಡು ಬಂದಿದ್ದ. ಬೌದ್ಧಿಕವಾಗಿಯೂ ನೈತಿಕವಾಗಿಯೂ ಉನ್ನತವಾಗಿರುತ್ತಿದ್ದ ಬರವಣಿಗೆಗೆ ಸಾಹಿತ್ಯದ ಲೇಪವಿರುತ್ತಿತ್ತು. ಪೆನಿ ಪತ್ರಿಕೆಗಳಲ್ಲೇ ಇನ್ನಾವುದರಲ್ಲೂ ಇರದಷ್ಟು ನಯವಾದ ಉದ್ರೇಕಕಾರಿ ಗುಣ ಇರುತ್ತಿತ್ತು. ಸಂಪಾದಕೀಯ ಬರಹಗಳಲ್ಲಿ ಬಲವಾದ ರಾಜಕೀಯ ದೃಷ್ಟಿಕೋನ ಇರುತ್ತಿತ್ತು. ಟ್ರಿಬ್ಯೂನ್‍ನ ಸಾಪ್ತಾಹಿಕ ಅತ್ಯಂತ ಜನಪ್ರಿಯವಾಗಿತ್ತು. ಉಚ್ಛ್ರಾಯ ಸ್ಥಿತಿಯಲ್ಲಿ ಅದರ ಸಂಖ್ಯೆ ಎರಡು ಲಕ್ಷ.

	ಬೆನೆಟ್ ಮತ್ತು ಗ್ರೀಲಿ ತಂತಮ್ಮ ಪತ್ರಿಕೆಗಳ ಮೂಲಕ ಸುಮಾರು ಮೂರು ದಶಕಗಳ ಕಾಲ ಸೆಣಸಿದರು. ಅವರಿಬ್ಬರೂ ಸತ್ತದ್ದು ಒಂದೇ ವರ್ಷ, 1872ರಲ್ಲಿ.

	ಪೆನಿ ಪತ್ರಿಕೆಗಳ ಆರಂಭದ ಸನ್ ಬಿಟ್ಟರೆ, ಹೆರಾಲ್ಡ್ ಮತ್ತು ಟ್ರಿಬ್ಯೂನ್ ಹಾಗೂ ಇತರ ಪತ್ರಿಕೆಗಳು ಬೆಲೆಯನ್ನು ಒಂದು ಸೆಂಟ್‍ನಿಂದ ಎರಡು ಸೆಂಟ್‍ಗಳಿಗೆ ಬೇಗನೇ ಏರಿಸಿದುವು.

	ಮೊತ್ತಮೊದಲು ಹಾಫ್‍ಟೋನ್ ಪಡಿಯಚ್ಚು ಬಳಸಿ ಚಿತ್ರ ಮುದ್ರಿಸಿದ ಮೂರು ಪತ್ರಿಕೆಗಳಲ್ಲಿ ಟ್ರಿಬ್ಯೂನ್ ಕೂಡ ಸೇರಿದೆ. ಬಂದರುಗಳನ್ನು ಹಡಗುಗಳು ತಲುಪುವ ಮುನ್ನವೇ ಅವುಗಳಿಂದ ಸುದ್ದಿ ಸಾಮಗ್ರಿ ತರಲು, ಹಡಗಿಗೆ ಪತ್ರಿಕೆಯ ಪ್ರತಿ ರವಾನಿಸಲು ಸ್ವಂತ ದೋಣಿಗಳನ್ನು ಹೊಂದಿದ್ದ ಕೀರ್ತಿ ಹೆರಾಲ್ಡ್‍ನದಾಗಿತ್ತು.

	ಹೆರಾಲ್ಡ್ ಮತ್ತು ಟ್ರಿಬ್ಯೂನ್‍ಗಳೆರಡೂ ತಂತಿಯನ್ನು ಸುದ್ದಿ ರವಾನೆಗಾಗಿ ಮೊದಮೊದಲೇ ಬಳಸಿಕೊಂಡುವು. ಯಂತ್ರ ಮುದ್ರಣ ಕಲೆ ಸುಧಾರಿಸಿದಂತೆ ತಡಮಾಡದೆ ಸಿಲಿಂಡರ್ ಯಂತ್ರಗಳನ್ನು ಹಾಕಿಕೊಂಡುವು.

	ಎರಡು ಪತ್ರಿಕೆಗಳು 1924ರಲ್ಲಿ ಒಂದುಗೂಡಿ ನ್ಯೂ ಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್ ಆದಮೇಲೆ ಅದು ಮುಂಚೂಣಿಯಲ್ಲೇ ಮುಂದುವರಿಯಿತು. ಇಪ್ಪತ್ತನೆಯ ಶತಮಾನದ ಪ್ರಥಮಾರ್ಧದಲ್ಲಿ ನ್ಯೂ ಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್ ಏಕಕಾಲದಲ್ಲಿ ನ್ಯೂ ಯಾರ್ಕ್ ಹಾಗೂ ಪ್ಯಾರಿಸ್‍ಗಳಿಂದ ಪ್ರಕಟವಾಗುತ್ತಿತ್ತು. ವಿಶ್ವವ್ಯಾಪಿಯೆನಿಸಿಕೊಂಡ ಪತ್ರಿಕೆಗಳಲ್ಲಿ ಇದೊಂದಾಗಿತ್ತು.

	1966ರ ಆಗಸ್ಟ್ 16ರಂದು ಹೆರಾಲ್ಡ್ ಟ್ರಿಬ್ಯೂನ್ ನಿಂತು ಹೋಯಿತು.				
(ಎಸ್.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ